ಕ್ರಿ.ಪೂ. 98-55. ರೋಮನ್ ತತ್ತ್ವಜ್ಞಾನಿ ಹಾಗೂ ಕವಿ. ಟಿಟುಸ್ ಲುಕ್ರೀಷಿಯಸ್ ಕಾರುಸ್ ಇವನ ಪೂರ್ಣ ಹೆಸರು. ಇವನ ಜೀವನವನ್ನು ಕುರಿತ ವಿವರಗಳು ಲಭ್ಯವಿಲ್ಲ. ಈತ ಡಿ ರೆರಮ್ ನ್ಯಾಚುರಾ (ಆನ್ ದಿ ನೇಚರ್ ಆಫ್ ಥಿಂಗ್ಸ್) ಎಂಬ ಕೃತಿಯನ್ನು ಬರೆದಿದ್ದಾನೆ. ಈ ಪದ್ಯಕಾವ್ಯದಲ್ಲಿ ಆರು ಪರಿಚ್ಛೇದಗಳಿವೆ. ಇದು ಎಪಿಕ್ಯೂರಸನ ದರ್ಶನವನ್ನು ಪ್ರತಿಪಾದಿಸುತ್ತದೆ. ಎಪಿಕ್ಯೂರಸ್ ಜನರನ್ನು ಭೂತಪ್ರೇತ ಪಿಶಾಚಿಗಳ ಹಾಗೂ ದೇವದೇವತೆಗಳ ಭಯದಿಂದ ವಿಮುಕ್ತಿಗೊಳಿಸಿದ. ಲುಕ್ರೀಷಿಯಸನ ಉದ್ದೇಶವೂ ಇದೇ ಆಗಿತ್ತು. ಎಪಿಕ್ಯೂರಸನ ಮತ್ತು ಲುಕ್ರೀಷಿಯಸನ ಪಂಥವನ್ನು ಸುಶಿಕ್ಷಿತ ಚಾರ್ವಾಕ ಪಂಥವೆಂದು ವರ್ಣಿಸಬಹುದು. ಈ ಪಂಥದ ಮೂಲತತ್ತ್ವಗಳನ್ನು ಲುಕ್ರೀಷಿಯಸ್ ಬಹಳ ಸ್ಪಷ್ಟವೂ ಗಂಭೀರವೂ ಆದ ಶೈಲಿಯಲ್ಲಿ ವಿವರಿಸುವುದು ಮಾತ್ರವಲ್ಲದೆ ಇತರ ವಿಷಯಗಳನ್ನೂ ಪ್ರಸ್ತಾಪಿಸುತ್ತಾನೆ. ಇವುಗಳಲ್ಲಿ ಮರಣಭಯ, ಪ್ರಪಂಚ ಸೃಷ್ಟಿ, ಸಮಾಜದ ವಿಕಾಸ, ಅಥೆನ್ಸ್‍ನ ಪ್ಲೇಗ್ ಪಿಡಗು ಇವೆಲ್ಲ ಸೇರಿವೆ. ಈತನ ಪ್ರಭಾವ ಸ್ಪೆನ್ಸರ್, ಹಾಬ್ಸ್, ಡ್ರೈಡನ್, ಶೆಲ್ಲಿ ಮೊದಲಾದ ಕವಿಗಳ, ಚಿಂತಕರ ಮೇಲೆ ಆಗಿದೆ. ಟೆನ್ನಿಸನ್ 1869ರಲ್ಲಿ ಲುಕ್ರೀಷಿಯಸ್ ಎಂಬ ದೀರ್ಘ ಕವನವನ್ನು ಬರೆದು ಇವನ ಸ್ಥಾನವನ್ನು ಚಿರಸ್ಥಾಯಿಗೊಳಿಸಿದ್ದಾನೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ